Sunday, February 28, 2010


ಲೆಕ್ಕ

ದಿನಕ್ಕೊಂದರಂತೆ ನೀ ಎಣಿಸಿ
ಕೊಟ್ಟ ಮುತ್ತುಗಳ ಲೆಕ್ಕ
ತಪ್ಪಿ ಹೋಗಿದೆ ಗೆಳತಿ.
ನನ್ನ ಖಾತೆಗೆ
ಸೇರದೆ ಹೋದ
ಅವುಗಳನ್ನೆಲ್ಲ
ವರ್ಷಪೂರ್ತಿ ಕುಳಿತು
ಲೆಕ್ಕ ಹಾಕುತ್ತಲಿದ್ದೇನೆ,
ವಸೂಲಾಗುವವರೆಗೂ
ಬಿಡುವುದಿಲ್ಲ
ಬಡ್ಡಿ ಸಮೇತ!

ಕಪ್ಪು ಚುಕ್ಕೆ

ಸವಿನೆನಪು ಸವಿಮಾತು,
ಹೇಳದೆ ಉಳಿದ ಮಾತುಗಳೆಲ್ಲ
ಹಾಳೆಗಳಲ್ಲಿ ಮೂಡಲು
ಕಾತರಪಡುತ್ತಿರುವಾಗ
ಕಳೆದ ಸಮಯವೆಲ್ಲ
ಕ್ಷಣದ ಮಧುರ ನೆನಪಾಗಿ,
ಲೇಖನಿಯ ಮಸಿಯಾಗಿ,
ಕಪ್ಪಾಗಿ ಬಾಳ ಪುಟದಲ್ಲಿ ದಾಖಲಾಗಿ,
ಅಳಿಸಿದರೂ ಹೋಗದ
ಕಲೆಗಳಾಗಿ ಉಳಿದುಬಿಡುತ್ತೆವೇನೋ
ಎಂಬ ಕನವರಿಕೆ
ತೆರೆತೆರೆಯಾಗಿ ಕಾಡುತ್ತಿವೆ
ಬಾಳ ಹಾಳೆಗಳ ಮೇಲೆ
ಎದ್ದು ಕಾಣುವ ಕಪ್ಪು ಚುಕ್ಕೆಯಂತೆ.

Saturday, February 27, 2010


ಬಂದು ಬಿಡು ಇನ್ನೊಮ್ಮೆ

ಸಾಕು ಮಾಡು ನಿನ್ನಯ ರುದ್ರ ನರ್ತನವ
ಜನ-ಜಾನುವಾರುಗಳೆಲ್ಲ ಅನಾಥವಾಗಿದೆ.
ಬಿತ್ತಿದ ಬೆಳೆ ನಾಶವಾಗಿದೆ,
ಕಟ್ಟಿದ ಸೂರು ಹಾಳಾಗಿದೆ,
ಕನಸುಗಳನ್ನೆಲ್ಲ ಪ್ರವಾಹ ಕೊಚ್ಚಿ ಕೊಂಡೊಯ್ದಿದೆ,
ಮುಂದೇನು ಎಂಬ ಚಿಂತೆ ಕಾಡಿದೆ!

ಇದ್ದೊಬ್ಬನಾಸರೆ ಕಳೆದುಕೊಂಡಿದ್ದೇನೆ,
ಮನೆ-ಮನ ಬೆಳಗುವವ ಇಲ್ಲೇ ಎಲ್ಲೋ
ಆಟವಾಡಿಕೊಂಡಿದ್ದವ ಕಾಣುತ್ತಿಲ್ಲ
ಜೊತೆಯಲ್ಲೇ ಇರುತ್ತೇನೆ ಎಂದವಳು
xxxxxxxxxxxxxxxxxxxxxxxxಹೇಳದೇ ಎತ್ತಲೋ ಹೋಗಿದ್ದಾಳೆ
xxxxxxxxxxxxxxxxxxxxxxxxಮನಸು ಕಂಗಾಲಾಗಿದೆ.
xxxxxxxxxxxxxxxxxxxxxxxxಬಂದು ಬಿಡು ಇನ್ನೊಮ್ಮೆ ಬಿಟ್ಟಿರಲಾರೆ ಅವರನ್ನು,
xxxxxxxxxxxxxxxxxxxxxxxxಬದುಕಿರಲಾರೆ ಅವರಿಲ್ಲದೆ ಬಂದು ಬಿಡು ಇನ್ನೊಮ್ಮೆ
ನಿರೀಕ್ಷೆ
ಬರುತ್ತೀನೆಂದು ಹೇಳಿದ್ದಿಯಲ್ಲ ನೀ ಕನಸಿಗೆ ಮನಸಿಗೆ,
ಕಾದೆ ನಾ ಹಗಲಿರುಳು ನೀ ಬರಲಿಲ್ಲ ಏಕೆ?
ಹುಣ್ಣಿಮೆ ಚಂದಿರನ ನೋಡುತ್ತಾ ಬೆಳಕಾಗಿದ್ದೇ ಗೊತ್ತಾಗಲಿಲ್ಲ.
ಹೌದಲ್ಲವೇ? ಗೆಳತಿ ನೀ ಹೇಳಿದ್ದು ಕನಸಿಗೆ ಎಂದಲ್ಲವೇ?
ಮಲಗದೇ ನೀ ಬರುವೆ ಹೇಗೆ ಅಲ್ಲವೇ?

ಮನ ದುಗುಡಗೊಂಡಿದೆ! ನೀ ಬಂದಾಗ ನಾ ಸವಿನಿದ್ದೆಯಲ್ಲಿದ್ದರೆ?
ತೊಂದರೆ ಕೊಡಬಾರದೆಂದು ನೀ ಹಾಗೆ ಹೊರಟು ಹೋದರೆ?
ಅಲ್ಲವೇ ಸಖಿ, ಮಲಗದೇ ಕಾದೆ ನಾ ನಿನ್ನ ಬರುವಿಕೆಗೆ
ಹಗಲಿನಲಿ ಬರಲಿಲ್ಲ ಇರುಳಿನಲಿ ಕಾಣಲಿಲ್ಲ
ಮತ್ತೆ ಯಾವಾಗ ಬರುವೆ ಹೇಳು ಸಖಿ.

ಹುಡುಕಾಟ

ಅಬ್ಬರದ ಅಲೆಯಲಿ ಕೊಚ್ಚಿಹೋದ;
ನಾವೆಯಂತಾಗಿದೆ ಬದುಕು.
ಆದ ಬದಲಾವಣೆಗಳನ್ನು ಸಹಿಸದೆ,
ಬಿರುಗಾಳಿಗೆ ಮೈಒಡ್ಡಿ ನಿಂತ
ಆ ಪರಿವೆಯನ್ನು ಹೇಗೆ ಬಿನ್ನವಿಸಲಿ.

ಬಸವಳಿದು ಬೆಂಡಾದ
ಈ ಮುಸ್ಸಂಜೆಯಲಿ
ನೆನಪುಗಳು ಕಾಡುತ್ತಿರುವಾಗ
ಬಿರುಗಾಳಿ ಬೀಸಿ ತಂದ,
ಕಣ ಕಣ ರಾಶಿಯಲ್ಲೂ
ಹುಡುಕಾಡಿ ತಡಕಾಡಿ ಬೇಸತ್ತೆ!
ಎಲ್ಲಿ ನೋಡಿದರಲ್ಲಿ ನೆನಪುಗಳ ರಾಶಿ

Sunday, February 7, 2010


ನಂಬಿಕೆ

ಆಸೆಯೆಂಬ ಇಂಧನ ತುಂಬಿ
ವಿಶ್ವಾಸದ ಚಕ್ರಗಳ ಮೇಲೆ
ಭರಪೂರ ಸವಾರಿ

ಆದರೂ ಗುರಿ ಮುಟ್ಟುತ್ತಿಲ್ಲ
ನಂಬಿಕೆ ಎಂಬ
ಇಂಜನ್ ಕೈ ಕೊಟ್ಟು
ಅದೆಷ್ಟೋ ಕಾಲವಾಯಿತು.

ಬಾ ಗೆಳತಿ....... ಬಾ.........

ನೂರು ಜನುಮದಲ್ಲೂ
ನೀನೆ ಇರಲಿ ಬಾಳಲಿ ಅಂದವಳು
ಹಾಗೇಕೆ ದೂರ ಸರಿಯುತ್ತಿರುವೆ?

ಹೊಂದಿಕೊಂಡರೆ ಬಾಳು
ಮುನಿಸಿಕೊಂಡರೆ ಪ್ರೀತಿ
ಜಗಳವಾಡಿದರೆ ಬಿಟ್ಟಿರಲಾರದಂತಹ
ಮೋಹ ಅಲ್ಲವೇ?

ಬಾ ಗೆಳತಿ, ಹುಸಿಮುನಿಸೇಕೆ
ಮುಖದಲಿ ಮುಖವಿಟ್ಟು
ಜಗಳವಾಡಿ ದಿನವಾಯಿತೆಷ್ಟು?

ಬಾ ಗೆಳತಿ....... ಬಾ.........
ಉಲ್ಲಾಸ

ಧನ್ಯವಾದ ಗೆಳತಿ
ಇಷ್ಟು ದಿನ ಮಗುಚಿ
ಮಕಾಡೆ ಮಲಗಿದ್ದ ನನ್ನ
ತಟ್ಟಿ ಎಬ್ಬಿಸಿದ್ದಕ್ಕೆ.

ಕಗ್ಗಂಟಾಗಿದ್ದ ಮನಸ್ಸು
ನವೊಲ್ಲಾಸದಿಂದ
ಪುಟಿದೇಳುತ್ತಿದೆ.

ಅಲ್ಲೆಲ್ಲೋ ಕಾಣಿಸುತ್ತಿದೆ
ನಿನ್ನಯ ಬಿಂಬ
ಬಾಳ ಹಾದಿಯಲ್ಲಿ ಮಸುಕಾಗಿ.
ಭರವಸೆ

ಬರದ ನಾಡಲ್ಲಿ
ಭರವಸೆಗಳ ಮಹಾಪೂರ
ಉಕ್ಕಿ ಹರಿಯುತ್ತಿದೆ!

ಎಂದೂ ಬರದ ರಾಜಕಾರಿಣಿ
ಜನರ ಮಧ್ಯೆ ನಿಂತು
ಮನ ತುಂಬಿ ಕೊಟ್ಟ ಆಶ್ವಾಸನೆ
ಹಾಗೇ ಕೊಚ್ಚಿ ಹೋಯಿತು
ಬರದ ನಾಡಿಗೆ.
ನೋಡುವ ಮೊದಲೇ

ಬಂದಾರೆ ಬಂದು ಬಿಡು
ಕ್ಷಣ ಕ್ಷಣವೂ ಕಾಡಬೇಡ.

ಇರಿದು ಬಿಡು
ಕಣ್ ಅಂಚಿನಲಿ ತುಂಬಿರುವ
ಕಣ್ಣೀರ ಕಡಲು
ಧರೆಗುರುಳುವ ಮೊದಲೇ

ಬದಲಿಸಬಿಡು ನಿನ್ನ ಮನಸನ್ನು
ನಾ ಬದಲಾಗುವ ಮೊದಲೇ
ಹೋಗಿಬಿಡು ಬೆನ್ನು ತೋರಿಸಿ
ಮತ್ತೆ ನಿನ್ನ ಮುಖ ನೋಡುವ ಮೊದಲೇ