Sunday, August 8, 2010

ಆ ಸಮಯ! 

ಅಂಚೆಯಣ್ಣನ ದಾರಿಕಾದು
ಬಸವಳಿದು,
ಬೀದಿಯ ಕೊನೆಯಲ್ಲಿ ಕಂಡೊಡನೆ
ಉಲ್ಲಾಸ ಪುಟಿದು
ಯಾರಿಗೂ ಗೊತ್ತಾಗದ ಹಾಗೆ
ಕದ್ದು ಮುಚ್ಚಿ ಓದಿ
ಅವನಾರಿಗೂ ಹೇಳುವುದಿಲ್ಲ
ಎಂಬ ಹುಸಿ ನಂಬಿಕೆಯೊಡನೆ
ದೂರದೂರಿನ ಕಾಗದಕ್ಕೆ
ಕಾಯುತ್ತಿದ್ದ ಆ ಸಮಯ
ಮರೆಯಲು ಸಾಧ್ಯವೇ  ?
ಅನೀರ್ಭವಿಸು
 ಸುಖದ ಶೃಂಗದಲ್ಲಿ
ಹರಿದ ಸುಖದ ಪ್ರವಾಹ
ತುಂಬಿ ಬರಲಿ
ಕಾಮನೆಗಳ ಝೇಂಕಾರ.
ಕಾಡಬೇಡ ಇನ್ನಷ್ಟು ಸುರಿದು ಬಿಡು
ತುಂಬಿ ಬಿಡಲಿ ಬರಿದಾದ ಒಡಲು
ಉಕ್ಕಲಿ ಜಲಪಾತದಂತೆ
ಭೋರ್ಗರೆಯಲಿ ಪ್ರವಾಹದಂತೆ
ಎಲ್ಲಾ ದಿಕ್ಕಿನಲು
ಅನೀರ್ಭವಿಸು
ಉತ್ತುಂಗದ ಶಿಖರದಲಿ
ತಳಮಳ
ನೂರು ಜನ್ಮಕೂ
ನೀ ಇರು ಜೊತೆಗೆ
ಅಂದವಳ ದನಿ
ನಗಾರಿಯಂತೆ
ಬಾರಿಸುತ್ತಿದೆ.

ಕಾಲನ ಸುಳಿಗೆ
ಸಿಲುಕಿ ಜನ್ಮಾಂತರದ
ಅಂತರಂಗವನ್ನರಿಯಲು
ಹೊರಟ ಅವಳ ಹಿಂಬಾಲಿಸದೇ
ಇಲ್ಲೇ ಇರಲಾಗದೆ
ತಳಮಳಗೊಂಡಿದೆ ಮನ

ಈ ಜನುಮದಲ್ಲೆ
ಸಿಕ್ಕದವಳು
ಮುಂದಿನ ಜನುಮದಲ್ಲೂ
ಸಿಗುವಳೇ ಏನು ?
ಎಂಬ ಖಾತ್ರಿ ಇಲ್ಲದೇ.